ಕ್ರೂಕ್ಸ್, ಸರ್ ವಿಲಿಯಂ	
	1832-1919. ಇಂಗ್ಲೆಂಡಿನ ರಸಾಯನ ಮತ್ತು ಭೌತ ವಿಜ್ಞಾನಿ. ಥಾಲಿಯಂ ಧಾತುವಿನ ಆವಿಷ್ಕರಣಕಾರ. ಜನನ ಲಂಡನ್ನಿನಲ್ಲಿ 1832ರ ಜೂನ್ 17ರಂದು. ರಸಾಯನ ವಿಜ್ಞಾನದ ರಾಯಲ್ ಕಾಲೇಜನ್ನು ಸೇರಿ ಅಲ್ಲಿ ಫಾನ್ ಹಾಫ್‍ಮನ್ ಎಂಬಾತನ ಸಹಾಯಕನಾದ (1848). ಆಕ್ಸ್‍ಫರ್ಡಿನಲ್ಲಿರುವ ರ್ಯಾಡ್‍ಕ್ಲಿಫ್ ವೀಕ್ಷಣಾಲಯದಲ್ಲಿ ಪವನಶಾಸ್ತ್ರದ ಕಾರ್ಯನಿರ್ವಾಹಕನಾದದ್ದು 1854ರಲ್ಲಿ. ಮುಂದಿನ ವರ್ಷ (1855) ಚೆಸ್ಟರ್ ನಗರದಲ್ಲಿ ರಸಾಯನ ವಿಜ್ಞಾನದ ಪ್ರಾಧ್ಯಾಪಕನಾದ. 1856ರಲ್ಲಿ ಮದುವೆಯಾದ ತರುವಾಯ ಕ್ರೂಕ್ಸ್ ಲಂಡನ್ ವಾಸಿಯಾಗಿ ತನ್ನ ಪೂರ್ತಿ ಕಾಲವನ್ನು ಸಂಶೋಧನೆಗಳಿಗೋಸ್ಕರ ಮೀಸಲಿಟ್ಟ. ಮನೆಯಲ್ಲೇ ಒಂದು ಸ್ವಂತ ಪ್ರಯೋಗಾಲಯವೂ ಈತನಿಗೆ ಇತ್ತು.

	1861ರಲ್ಲಿ ಕ್ರೂಕ್ಸ್ ಸಲ್ಫ್ಯೂರಿಕ್ ಆಮ್ಲವನ್ನು ತಯಾರಿಸಿ ಮಿಗುವ ಅದುರಿನ ಉಳಿಕೆ ವಸ್ತುವಿನ ಮೇಲೆ ಪ್ರಯೋಗಗಳನ್ನು ಮಾಡಿ ರೋಹಿತದ ಪರಿಶೀಲನೆಯಿಂದ ಥಾಲಿಯಂ ಎಂಬ ಧಾತುವನ್ನು ಆವಿಷ್ಕರಿಸಿದ. ಇದರ ಗುಣಗಳನ್ನು ಪರಿಶೀಲನೆ ಮಾಡುವ ಸಂದರ್ಭದಲ್ಲಿ ನಡೆಸಿದ ಸಂಶೋಧನೆಗಳ ಫಲವಾಗಿ ಈತ ವಿಕಿರಣಪಟುತ್ವ ಮಾಪಕಗಳನ್ನು ನಿರ್ಮಿಸಬೇಕಾಯಿತು (1875-77). ಅಲ್ಪಸಂಮರ್ದ ಅನಿಲಗಳ ಮೇಲೆ ವಿದ್ಯುತ್ತನ್ನು ವಿಸರ್ಜನೆ ಮಾಡಿದಾಗ ಆಗುವ ಪರಿಣಾಮಗಳ ಮೇಲೆ ಸಂಶೋಧನೆ ನಡೆಸಿ ಈಗ ಈತನ ಹೆಸರಿನಿಂದ ಕರೆಯಲ್ಪಡುವ ಕ್ರೂಕ್ಸನ ಕತ್ತಲೆಯ ಜಾಗವನ್ನು ಗಮನಿಸಿದ. ಅಧೋವಾಟ (ಕ್ಯಾಥೋಡ್) ಕಿರಣಗಳನ್ನು ಪರಿಶೀಲಿಸಲು ಹಲವಾರು ಸಲಕರಣೆಗಳನ್ನು ನಿರ್ಮಿಸಿದ (ನೋಡಿ- ಅಧೋವಾಟ-ಕಿರಣಗಳು). ಇಂಥ ವಿಸರ್ಜನ ಕೊಳವೆಯನ್ನು ಉಪಯೋಗಿಸಿಯೇ ಜರ್ಮನ್ ಭೌತವಿಜ್ಞಾನಿ ರಂಟ್‍ಗೆನ್ ಎಕ್ಸ್ ಕಿರಣಗಳನ್ನು 1895ರಲ್ಲಿ ಕಂಡು ಹಿಡಿದದ್ದು. ರೇಡಿಯಮನ್ನು ಕ್ಯೂರಿ ದಂಪತಿಗಳು ಆವಿಷ್ಕರಿಸಿದ ಮೇಲೆ ಅದರ ಗುಣಗಳ ಪರಿಶೀಲನೆ ಕ್ರೂಕ್ಸ್‍ನ ಆಸಕ್ತ ವಿಷಯವಾಯಿತು. ಆಗ ಈತ ಸ್ಫುರಣದರ್ಶಕವನ್ನು (ಸಿನ್‍ಥಾರಿ ಸ್ಕೋಪ್) ರಚಿಸಿದ. ಈ ದರ್ಶಕದ ನೆರವಿನಿಂದ ಅತ್ಯಲ್ಪ ಪರಿಮಾಣದ ರೇಡಿಯಂ ಧಾತುವನ್ನು ಸಹ ಗುರುತಿಸುವುದು ಸಾಧ್ಯ. ಕೆಲಸಗಾರರ ಕಣ್ಣುಗಳಿಗೆ ಹಾನಿಕರವಾದ ಉಷ್ಣ ಮತ್ತು ಅತಿನೇರಿಳೆ ಕಿರಣಗಳಿಂದ ರಕ್ಷಣೆ ನೀಡುವಂಥ ಹೊಸ ಮಾದರಿಯ ಗಾಜನ್ನು ಕ್ರೂಕ್ಸ್ ತಯಾರಿಸಿದ.

	ಸರ್ಕಾರ ಕ್ರೂಕ್ಸನನ್ನು ರಸಾಯನ ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳ ಮೇಲೆ ಯಾವಾಗಲೂ ಸಲಹೆ ಕೇಳುತ್ತಿತ್ತು. ಈತ ಕೆಮಿಕಲ್ ನ್ಯೂಸ್ ಎಂಬ ಪತ್ರಿಕೆಯನ್ನು ಸ್ಥಾಪನೆ ಮಾಡಿ (1859) 1906ರ ವರೆಗೆ ಅದರ ಸಂಪಾದಕನಾಗಿದ್ದ. ರಸಾಯನ ವಿಜ್ಞಾನದ ಮೇಲೆ ಹಲವಾರು ಪುಸ್ತಕಗಳನ್ನು ಬರೆದಿದ್ದಾನೆ ಇಲ್ಲವೇ ಅವುಗಳಿಗೆ ಸಂಪಾದಕನಾಗಿದ್ದಾನೆ. ಸೆಲೆಕ್ಟ್ ಮೆಥಡ್ಸ್ ಆಫ್ ಕೆಮಿಕಲ್ ಅನ್ಯಾಲಿಸಿಸ್ (1871) ಅವುಗಳಲ್ಲಿ ಮುಖ್ಯವಾದ ಪುಸ್ತಕ. ಕ್ರೂಕ್ಸ್‍ನಿಗೆ 1897ರ ನೈಟ್ ಪದವಿಯನ್ನೂ 1910ರಲ್ಲಿ ಆರ್ಡರ್ ಆಫ್ ಮೆರಿಟ್ ಗೌರವವನ್ನೂ ಕೊಡಲಾಯಿತು. ಲಂಡನ್ನಿನಲ್ಲಿ ಏಪ್ರಿಲ್ 4, 1919ರಂದು ಕ್ರೂಕ್ಸ್ ಗತಿಸಿದ.   (ಎನ್.ಜಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ